ಮೇಸ್‍ಫೀಲ್ಡ್, ಜಾನ್ ಎಡ್ವರ್ಡ್
1875-1967. ಇಂಗ್ಲಿಷ್ ಸಾಹಿತಿ. ಪ್ರಧಾನವಾಗಿ ಕವಿ. ಸಣ್ಣಕತೆ, ಕಾದಂಬರಿ, ನಾಟಕಗಳನ್ನು ಬರೆದಿದ್ದಾನೆ. ಕಡಲ ಮತ್ತು ಗ್ರಾಮೀಣ ಜೀವನಚಿತ್ರಗಳನ್ನು ತನ್ನ ಕಥನಕವನ ಮತ್ತು ಕಾದಂಬರಿಗಳಲ್ಲಿ ಅಸದೃಶವಾಗಿ ಹಿಡಿದಿಟ್ಟಿದ್ದಾನೆ. ಹುಟ್ಟಿದ್ದು ಕಟ್‍ಫರ್ಡ್‍ಪೂರಿನ ಲೆಡಬರಿಯಲ್ಲಿ. ಪಾರ್ವಿಕ್‍ನ ಕಿಂಗ್ಸ್ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಅನಾಥನಾದ ಈತ 13 ನೆಯ ವಯಸ್ಸಿನಲ್ಲೇ ಊರುಬಿಟ್ಟು ಓಡಿಹೋದ. ಹಡಗಿನಲ್ಲಿ ಕೆಲಸಕ್ಕೆ ಸೇರಿ ಕಡಲಯಾನ ಮಾಡುತ್ತ ಹಲವಾರು ದೇಶಗಳಲ್ಲಿ ಪರ್ಯಟನ ಮಾಡಿದ. ಜೀವನನಿರ್ವಹಣೆಗೆ ಅನೇಕ ಬಗೆಯ ಉದ್ಯೋಗಗಳಲ್ಲಿ ಕೆಲಸದ ಹುಡುಗನಾಗಿ ಸೇರಿಕೊಂಡ. ಓದು ಬರೆಹ ಎಂದರೆ ಮೊದಲಿನಿಂದಲೂ ಆಸಕ್ತಿ ಇದ್ದು ಉದ್ಯೋಗಗಳಲ್ಲಿದ್ದರೂ ಬಿಡುವಿನ ಸಮಯವನ್ನು ವ್ಯಾಸಂಗದಲ್ಲಿ ಕಳೆಯುತ್ತಿದ್ದ. 1897ರಲ್ಲಿ ಇಂಗ್ಲೆಂಡಿಗೆ ಹಿಂತಿರುಗಿ ಪತ್ರಿಕೋದ್ಯಮದಲ್ಲಿ ತೊಡಗಿದ. ಮ್ಯಾಂಚೆಸ್ಟರ್ ಗರ್ಡಿಯನ್ ಪತ್ರಿಕೆಯ ಮಿಸೆಲೆನಿ ಅಂಕಣದ ಸಂಪಾದಕನಾಗಿ ಬ್ಲೂಮ್ಸ್‍ಬರಿಯಲ್ಲಿ ನೆಲಸಿದ. 1902ರಲ್ಲಿ ಸಾಲ್ಟ್‍ವಾಟರ್ ಬ್ಯಾಲೆಡ್ಸ್ ಎಂಬ ಮೊದಲ ಕವನ ಸಂಕಲನ ಪ್ರಕಟಿಸಿದ. 1903ರಲ್ಲಿ ಬ್ಯಾಲೆಡ್ಸ್ ಎಂಬ ಇನ್ನೊಂದು ಕವನ ಸಂಕಲನ ಹೊರತಂದ. 

1901 ರಿಂದ 1911 ತನಕ ಕವನ, ನಾಟಕ, ಕಾದಂಬರಿ, ಸಣ್ಣಕತೆ, ಲಲಿತ ಪ್ರಭಂಧ, ವಿಮರ್ಶೆ ಇತ್ಯಾದಿ ಹಲವು ಬಗೆಯ ಸಾಹಿತ್ಯ ರಚನೆಮಾಡಿದ. ಆದರೆ ಪ್ರಖ್ಯಾತನಾಗಲಿಲ್ಲ. ಸಾಹಿತಿ ಎಂಬ ಮನ್ನಣೆ ಮಾತ್ರ ದೊರಕಿತ್ತು. 1911ರಲ್ಲಿ ಪ್ರಕಟವಾದ ದ ಎವರ್‍ಲಾಸ್ಟಿಂಗ್ ಮರ್ಸಿ ಎಂಬ ಕಥನಕವನ ಇವನಿಗೆ ಹೆಸರು ತಂದಿತು. 

ಆ ವೇಳೆಗಾಗಲೆ ಪ್ರಕಟವಾಗಿದ್ದ ದ ಟ್ರ್ಯಾಜಿಡಿ ಆಫ್ ನಾನ್ ಅಂಡ್ ಅದರ್ ಪ್ಲೇಸ್ (1909), ದ ಟ್ರ್ಯಾಜಿಡಿ ಆಫ್ ಪಾಂಪೆ ದಿ ಗ್ರೇಟ್ (1910) ಎಂಬ ಎರಡು ನಾಟಕಗಳೂ ಎ ಬುಕ್ ಆಫ್ ಡಿಸ್ಕವರೀಸ್ (1910), ಕ್ಯಾಪ್ಟನ್ ಮಾರ್ಗರೆಟ್ (1908), ಲಸ್ಟ್ ಎಂಡೆವೊರ್ (1910), ಕಿಶೋರರಿಗೆಂದೇ ಬರೆದ, ಮಲ್ಟಿಟ್ಯೂಡ್ ಅಂಡ್ ಸಾಲಿಟ್ಯೂಡ್ (1909) ಎಂಬ ಧೈರ್ಯ ಸಾಹಸಮಯ ಕಾದಂಬರಿಗಳೂ ದಿ ಲಿರಿಕ್ಸ್ ಆಫ್ ಬೆನ್ ಜಾನ್ಸನ್, ಬೊಮಾಂಟ್ ಅಂಡ್ ಫ್ಲೆಚರ್ (1906), ದಿ ಪೊಯೆಮ್ಸ್ ಆಫ್ ರಾಬರ್ಟ್ ಹೆರಿಕ್ (1906), ಡೀಫೊ (ಸೆಲೆಕ್ಷನ್ಸ್) (1909) ಎಂಬ ಸಂಪಾದಿತ ಗ್ರಂಥಗಳೂ ಇವನಿಗೆ ಮನ್ನಣೆ ತಂದಿದ್ದರೂ ದ ಎವರ್ ಲಾಸ್ಟಿಂಗ್ ಮರ್ಸಿ ತಂದ ಜನಪ್ರಿಯತೆ ಮಾತ್ರ ಅಪೂರ್ಣವಾದುದಾಗಿತ್ತು. ಬರೆದ ಎರಡೂ ನಾಟಕಗಳೂ ಶ್ರೇಷ್ಠವೆನಿಸಿದವು. ಪಾಂಪೆ ಐತಿಹಾಸಿಕ ನಾಟಕ ದ ಟ್ರ್ಯಾಜಿಡಿ ಆಫ್ ನಾನ್ ಗ್ರಾಮಜೀವನದ ಹಿನ್ನೆಲೆಯ ಸಾಮಾಜಿಕ ನಾಟಕ. 1912ರಲ್ಲಿ ಕವಿಗೆ ಪಾಲಿಗ್ನ್ಯಾಕ್ ಬಹುಮಾನ ದೊರಕಿತು. ಒಂದನೆಯ ಮಹಾಯುದ್ಧ ಕಾಲದಲ್ಲಿ ಈತ ಫ್ರಾನ್ಸ್ ಮತ್ತು ಗ್ಯಾಲಿಫೋಲಿಯಲ್ಲಿ ರೆಡ್‍ಕ್ರಾಸ್ ಸಂಸ್ಥೆಯ 
ಸೇವಾಕಾರ್ಯದಲ್ಲಿ ಸ್ವಯಂಸೇವಕನಾಗಿ ಭಾಗವಹಿಸಿದ. 1911ರಲ್ಲಿ ಜಿಮ್ ಡೆವಿಸ್ ಎಂಬ ಮತ್ತೊಂದು ಜನಪ್ರಿಯ ಕಾದಂಬರಿ, 1912ರಲ್ಲಿ ದ ವಿಡೊ ಇನ್ ದ ಬೈಸ್ಟ್ರೀಟ್, 1913ರಲ್ಲಿ ಡಾಬರ್; ದ ಡಾಫೋಡಿಲ್ ಫೀಲ್ಡ್ಸ್ ಎಂಬ ಕಾವ್ಯ ಕೃತಿಗಳೂ ಪ್ರಕಟವಾದವು. ಕವಿ ಛಾಸರ್‍ನ ಪ್ರೈಯರೆಸ್ಸನ್ ಟೇಲ್ ನ ಕಥೆಯೇ ದ ವಿಡೊ ಇನ್ ದ ಬೈಸ್ಟ್ರೀಟ್‍ನ ಕಾವ್ಯವಸ್ತು. 1919ರಲ್ಲಿ ಮತ್ತೊಂದು ಮಹತ್ತ್ವಪೂರ್ಣವಾದ ಕಥನಕಾವ್ಯ ರೆನಾರ್ಡ್ ದ ಫಾಕ್ಸ್ ಪ್ರಕಟವಾಯಿತು. 

ದ ಟ್ರಯಲ್ ಆಫ್ ಜೀಸಸ್ (1925), ದ ಕಮಿಂಗ್ ಆಫ್ ಜೀಸಸ್ ಕ್ರೈಸ್ಟ್ (1928) ಎಂಬ ಇನ್ನೆರಡು ನಾಟಕಗಳು ಉತ್ತಮವಾದ ರಚನೆಗಳಾಗಿವೆ. ಸಾರ್ಡ್ ಹಾರ್ಕರ್ (1924), ಓಡ್‍ಟಾ (1926), ದ ಹಾಬಕ್ಸ್ (1929), ಷೇಕ್‍ಸ್ಪಿಯರ್ (1911)- ಇವು ಇತರ ಕೃತಿಗಳು. 

ಮೇಸ್‍ಫೀಲ್ಡ್ ಕ್ರಮೇಣ ಯಶಸ್ಸಿನ ಮೆಟ್ಟಿಲುಗಳನ್ನು ಏರತೊಡಗಿದ. 1922ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಗೌರವ ಡಾಕ್ಟೊರೇಟ್ ಪ್ರಶಸ್ತಿಯನ್ನಿತ್ತು ಗೌರವಿಸಿತು. ಅದೇ ವರ್ಷ ಅಬರ್ಡಿನ್ ವಿಶ್ವವಿದ್ಯಾಲಯ ಸಹ ಗೌರವ ಎಲ್. ಎಲ್. ಡಿ. ಪದವಿಯನ್ನಿತ್ತು ಸನ್ಮಾನಿಸಿತು. ಬ್ರಿಟಿಷ್ ಸರ್ಕಾರ ರಾಷ್ಟ್ರಕವಿ (ಪೊಯೆಟ್ ಲರಿಯೆಟ್) ಎಂದು ನೇಮಿಸಿತು. 1925ರಲ್ಲಿ ಆರ್ಡರ್ ಆಫ್ ಮೆರಿಟ್ ಗೌರವವೂ 1937 ರಿಂದ ಜೀವನ ಪರ್ಯಂತ ನಾಟಕ -ಗೀತ-ಲೇಖಕರ ಬಳಗದ ಗೌರವಾಧ್ಯಕ್ಷ ಪದವಿಯೂ ದೊರೆತವು. ಬ್ರಿಟಿಷ್ ಕೌನ್ಸಿಲ್‍ನ ಬುಕ್ ಅಂಡ್ ಪೀರಿಯಾಡಿಕಲ್ಸ್, ಕಮಿಟಿಯ ಸದಸ್ಯನಾಗಿ ಆಹ್ವಾನಿತನಾದ. ಬ್ರಿಟಿಷ್ ಕೌನ್ಸಿಲ್ ಕಾರ್ಯಕ್ರಮಗಳಿಗನುಗುಣವಾಗಿ ಯುರೋಪಿನ ಅನೇಕ ದೇಶಗಳಿಗೆ ಹೋಗಿ ಉಪನ್ಯಾಸಗಳನ್ನು ಕೊಟ್ಟ. 1938ರಲ್ಲಿ ಹ್ಯಾಂಬರ್ಗ್ ವಿಶ್ವವಿದ್ಯಾಲಯದ ಷೇಕ್‍ಸ್ಪಿಯರ್ ಬಹುಮಾನ ದೊರಕಿತು. 1961ರಲ್ಲಿ ರಾಯಲ್ ಸೊಸೈಟಿ ಆಫ್ ಲಿಟರೇಚರ್‍ನ ಗೌರವ ಸದಸ್ಯನಾದ. 1962ರಲ್ಲಿ ನ್ಯಾಷನಲ್ ಬುಕ್ ಲೀಗ್‍ನ ಪ್ರಶಸ್ತಿಯನ್ನೂ ಪಡೆದ. 

ಮೇಸ್‍ಫೀಲ್ಡ್‍ನ ಸಮಗ್ರ ಕೃತಿಗಳಲ್ಲಿ 48 ಕಾವ್ಯಗಳೂ 20 ನಾಟಕಗಳೂ 14 ಕಾದಂಬರಿಗಳೂ 2 ಸಣ್ಣ ಕಥಾಸಂಕಲನಗಳೂ 36 ಇತರ ಬಗೆಯ ಗ್ರಂಥಗಳೂ ಸೇರಿವೆ.

ಮೆಸ್‍ಫೀಲ್ಡ್ ಕೀರ್ತಿವಂಶ ಮಾತ್ರವಲ್ಲ ಅತ್ಯಂತ ಜನಪ್ರಿಯನಾಗಿದ್ದ ಕವಿ. ಕಡಲ ಜೀವನದ ಚಿತ್ರಗಳನ್ನು ಇವನ ಹಾಗೆ ಪಡಿಮೂಡಿಸಿದ ಸಾಹಿತಿಗಳು ತೀರ ವಿರಳ. ಹಾಗೆಯೇ ಈತ ಆರಿಸಿಕೊಂಡ ಅನೇಕ ವಸ್ತುಗಳು ಹಳ್ಳಿಯ ಜೀವನಕ್ಕೆ ಸಂಬಂಧಪಟ್ಟವು. ಜಾರ್ಜಿಯನ್ ಸಾಹಿತ್ಯ ಯುಗದವನಾದರೂ ಆ ಚೌಕಟ್ಟಿಗೆ ಮೀರಿದ ಸತ್ತ್ವ, ಹೊಸತನ, ಸಮೃದ್ಧಿ ಈತನ ಸಾಹಿತ್ಯದಲ್ಲಿ ಕಾಣುತ್ತದೆ. ಕಾವ್ಯ ಈತನ ಸಹಜವಾದ ಮಾಧ್ಯಮ. ನಾಟಕಗಳನ್ನೂ ಕಾವ್ಯದಲ್ಲೇ ಬರೆದ. ಕಥನಕಲೆ, ನಿರೂಪಣಾ ಸಾಮಥ್ರ್ಯದಲ್ಲಿ ಈತ ನಿಷ್ಣಾತ. ಛಾಸರ್‍ನ ಅನಂತರ ಇಂಗ್ಲಿಷ್ ಕಾವ್ಯಲೋಕದಲ್ಲಿ ಅದ್ಭುತ ಕಥನಕವಿಯೆಂದು ಹೆಸರಾದವ.

ಈತನ ಗಮನಾರ್ಹವಾದ ಇತರ ಕೃತಿಗಳು : ಕಾವ್ಯ: ಮಿಡ್ ಸಮ್ಮರ್ ನೈಟ್ ಅಂಡ್ ಅದರ್ ಟೇಲ್ಸ್ (2928); ಪೊಯೆಮ್ಸ್ ಆಫ್ ದ ವಾಂಡರಲ್; ದ ಎಂಡಿಂಗ್ (1930); ಎ ಟೇಲ್ ಆಫ್ ಟ್ರಾಯ್ (1932); ಗೌತಮ ದ ಎನ್ಲೈಟನ್ಡ್ ಅಂಡ್ ಅದರ್‍ವೈಸ್ (1941). ನಾಟಕ; ಎ ಕಿಂಗ್ಸ್ ಡಾಟರ್ (ಎ ಟ್ರ್ಯಾಜಿಡಿ ಇನ್ ವರ್ಸ್, 1923); ಎ ಪ್ಲೇ ಆಫ್ ಸೇಂಟ್ ಜಾರ್ಜ್ (1948). ಆತ್ಮಕಥೆ - ಇನ್ ದ ಮಿಲ್ (1941); ನ್ಯೂ ಛಮ್ (1944); ಸೋ ಲಾಂಗ್ ಟು ಲರ್ನ್ (1952); ಗ್ರೇಸ್ ಬಿಫೋರ್ ಫ್ಲೋಯಿಂಗ್ (1966). ಸಂಪಾದಿತ: ಮೈ ಫೇವರಿಟ್ ಇಂಗ್ಲಿಷ್ ಪೊಯೆಮ್ಸ್ (1950). ಇತರ: ಜಾನ್ ರಸ್ಕಿನ್ (1920); ಸಮ್ ಮೆಮೊರೀಸ್ ಆಫ್ ಡಬ್ಲ್ಯು. ಬಿ.ಯೇಟ್ಸ್ (1940).
(ಕೆ.ಬಿ.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ